ಕೊಪ್ಪಳ: ಹೊಸಪೇಟೆಯಲ್ಲಿ ಇಂದು (ಮೇ 20) ನಡೆಯುತ್ತಿರುವ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಆಹ್ವಾನ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಆಡಿಯೋ ಸಂದೇಶದ ಮೂಲಕ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಅವರು, ತಮ್ಮ ಬೆಂಬಲಿಗರಿಗೆ ಕಾರ್ಯಕ್ರಮಕ್ಕೆ ತೆರಳುವಂತೆ ಸೂಚಿಸಿದ್ದಾರೆ.
ತಮ್ಮ ಆಡಿಯೋದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಅನ್ಸಾರಿ, “ನನಗೆ ಗುಲಾಮಗಿರಿ ಮಾಡಿ ರಾಜಕೀಯ ಮಾಡುವುದು ತಿಳಿದಿಲ್ಲ. ಅಭಿವೃದ್ಧಿಗಾಗಿ ನಾನು ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಆದರೆ ಹೊಸಪೇಟೆಯ ಕಾರ್ಯಕ್ರಮಕ್ಕೆ ಜಿಲ್ಲಾಡಳಿತವಾಗಲಿ ಅಥವಾ ಸರ್ಕಾರದಿಂದಾಗಲಿ ನನಗೆ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ” ಎಂದು ಹೇಳಿದ್ದಾರೆ.
“ನೀವೆಲ್ಲರೂ ಕಾರ್ಯಕ್ರಮಕ್ಕೆ ಹೋಗಿ ಬನ್ನಿ. ಕಾರ್ಯಕ್ರಮ ಮುಗಿದ ನಂತರ ಈ ವಿಷಯದ ಬಗ್ಗೆ ವಿಸ್ತೃತವಾಗಿ ಮಾತನಾಡೋಣ” ಎಂದು ಅವರು ತಮ್ಮ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ಅಲ್ಲದೆ, “ನನ್ನನ್ನು ವ್ಯವಸ್ಥಿತವಾಗಿ ಮುಗಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕೊಪ್ಪಳ ಜಿಲ್ಲೆ ಹಾಗೂ ಬೆಂಗಳೂರಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಿಮಗೆಲ್ಲ ತಿಳಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಕೆಲ ನಾಯಕರ ನಡೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಅನ್ಸಾರಿ, “ಕೆಲವರಿಗೆ ಲೋಕಸಭಾ ಚುನಾವಣೆ ಇದ್ದಾಗ ಮಾತ್ರ ಅನ್ಸಾರಿ ಬೇಕು. ನಂತರ ಕನಿಷ್ಠ ಧನ್ಯವಾದ ಹೇಳುವ ಸೌಜನ್ಯ ಕೂಡ ನಮ್ಮ ಜಿಲ್ಲೆಯ ಕೆಲ ನಾಯಕರಿಗಿಲ್ಲ” ಎಂದು ಟೀಕಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಶೇ. 88 ರಿಂದ 90 ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದ್ದರೂ ಸಹ ನಮ್ಮಂತಹವರಿಗೆ ಅನ್ಯಾಯ ಮಾಡಲಾಗುತ್ತಿದೆ. ಅಧಿಕಾರ ಬಂದ ನಂತರ ಕೆಲವರಿಗೆ ನೆಲ ಮತ್ತು ಮತದಾರರು ಕಾಣುತ್ತಿಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ” ಎಂದು ಅವರು ಕಿಡಿಕಾರಿದ್ದಾರೆ.