ಗದಗ: ತಾಲೂಕು ಕಚೇರಿಯಲ್ಲಿ ಉಪತಹಸೀಲ್ದಾರರೊಬ್ಬರು ಕುರ್ಚಿಯಿಂದ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ದುಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ತೀವ್ರವಾಗಿ ಖಂಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ತಹಸೀಲ್ದಾರ್ ಕಚೇರಿಯಂತಹ ಸಾರ್ವಜನಿಕ ಸ್ಥಳದಲ್ಲಿ ಅಧಿಕಾರಿಯೊಬ್ಬರು ಈ ರೀತಿ ವರ್ತಿಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಇದು ಜಿಲ್ಲೆಯ ಕಾನೂನು ಸುವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂಬುದನ್ನು ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ತಕ್ಷಣವೇ ದೂರವಾಣಿ ಮೂಲಕ ಮಾತನಾಡಲಾಗಿದ್ದು, ಆರೋಪಿ ಉಪತಹಸೀಲ್ದಾರರನ್ನು ಅಮಾನತುಗೊಳಿಸುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಕೇವಲ ಅಮಾನತು ಶಿಕ್ಷೆ ಸಾಕಾಗುವುದಿಲ್ಲ. ಇಂತಹ ದುರ್ನಡತೆ ತೋರಿದ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಶಾಸಕರು ಒತ್ತಾಯಿಸಿದರು.

ಕಾನೂನು ಸಚಿವ ಎಚ್.ಕೆ. ಪಾಟೀಲ ಅವರ ಸ್ವಕ್ಷೇತ್ರದಲ್ಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಆಘಾತವನ್ನುಂಟು ಮಾಡಿದೆ. ಈ ಘಟನೆಯ ಗಂಭೀರತೆಯನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೂ ವಿಡಿಯೋ ಸಹಿತ ಮಾಹಿತಿ ನೀಡಲಾಗಿದೆ. ತಪ್ಪಿತಸ್ಥ ಉಪತಹಸೀಲ್ದಾರರನ್ನು ಸೇವೆಯಿಂದ ವಜಾಗೊಳಿಸದಿದ್ದಲ್ಲಿ, ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಿ.ಸಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.