ಕನಕಗಿರಿ (ಕೊಪ್ಪಳ): ಪಟ್ಟಣದ 13ನೇ ವಾರ್ಡ್ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಶುಕ್ರವಾರ ಬೆಳಕಿಗೆ ಬಂದಿದೆ. 100 ರೂಪಾಯಿ ನೀಡಲು ನಿರಾಕರಿಸಿದ್ದಕ್ಕೆ ಮೊಮ್ಮಗ ತನ್ನ ಅಜ್ಜಿಯನ್ನು ಕೊ*ಲೆ ಮಾಡಿರುವ ಅಮಾನವೀಯ ಕೃತ್ಯ ನಡೆದಿದೆ.
ಕೊಲೆಯಾದ ವೃದ್ಧೆಯನ್ನು ಕನಕಮ್ಮ (61) ಎಂದು ಗುರುತಿಸಲಾಗಿದೆ. ಆರೋಪಿ ಮೊಮ್ಮಗ ಚೇತನ ಕುಮಾರ ಹಣಕ್ಕಾಗಿ ಪೀಡಿಸುತ್ತಿದ್ದನು. ಶುಕ್ರವಾರ ಆತ ಅಜ್ಜಿ ಕನಕಮ್ಮನಿಗೆ 100 ರೂಪಾಯಿ ಕೊಡುವಂತೆ ಕೇಳಿದ್ದಾನೆ. ಹಣವಿಲ್ಲ ಎಂದು ಅಜ್ಜಿ ಹೇಳಿದಾಗ ಹಾಗೂ ಆತನ ತಂದೆಯನ್ನು ಕೇಳುವಂತೆ ತಿಳಿಸಿದಾಗ ಕೋಪಗೊಂಡ ಚೇತನ ಕುಮಾರ ಮನೆಯಲ್ಲಿದ್ದ ರುಬ್ಬುವ ಗುಂಡಿನಿಂದ ಆಕೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ.
ತೀವ್ರವಾಗಿ ಗಾಯಗೊಂಡ ಕನಕಮ್ಮ ಅವರನ್ನು ತಕ್ಷಣವೇ ಕನಕಗಿರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತು. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದರು.
ಈ ಘಟನೆಗೆ ಸಂಬಂಧಿಸಿದಂತೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿ ಚೇತನ ಕುಮಾರನನ್ನು ಬಂಧಿಸಿದ್ದಾರೆ.