ಗದಗ: ಶರಣು ಇಷ್ಟಲಿಂಗ ಪೂಜೆಯ ಮೂಲಕ ಏಕದೇವೋಪಾಸನೆ ಪ್ರತಿಪಾದಿಸಿದರು. ಆದರೆ ಕೆಲ ಶರಣರು ಇಷ್ಟಲಿಂಗದ ಜೊತೆಗೆ ಸ್ಥಾವರನ್ನು ಪೂಜೆ ಮಾಡಿದರು. ಸ್ವತಃ ಬಸವಣ್ಣನವರೆ ಅಂತಿಮವಾಗಿ ಕೂಡಲ ಸಂಗಮನನ್ನು ಪೂಜೆ ಮಾಡಿ, ತಾವು ಉಭಯಲಿಂಗ ಸಂಗಿ ಎನ್ನುವುದನ್ನು ಒಪ್ಪಿಕೊಂಡರು ಎಂದು ಹಿರಿಯ ಸಂಶೋಧಕ ಹಿರಿಯ ಸಂಶೋಧಕ ಡಾ. ಸಂಗಮೇಶ ಸವದತ್ತಿಮಠ ಹೇಳಿದರು.
ಭಾನುವಾರ ಇಲ್ಲಿನ ನಾಗಾವಿ ಗುಡ್ಡದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಬಯಲು, ವಿವೇಕ ವೇದಿಕೆ, ಕನಕದಾಸ ಶಿಕ್ಷಣ ಸಮಿತಿ ಸಹಯೋಗದಲ್ಲಿ ನಡೆದ ವಚನ ದರ್ಶನ (ಭಕ್ತಿ-ಕಾಯಕ- ದಾಸೋಹ) ರಾಷ್ಟ್ರಿಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಸ್ಥಾಪರಪೂಜೆಯನ್ನು ಆ ಕಾಲದಲ್ಲಿ ಕೆಲವರು ಪ್ರಶ್ನಿಸಿದರು. ಆಗ ಆವರು ಆ ಲಿಂಗ ಈ ಲಿಂಗ ಎಲ್ಲವೂ ಒಂದೆ. ಅವುಗಳ ಪೂಜೆಯಿಂದ ನೆಮ್ಮದಿ ಸಿಗುತ್ತದೆ ಎಂದು ಉತ್ತರಿಸಿದ್ದಾರೆ. ಅಲ್ಲದೇ ಅನೇಕ ಶರಣರು ಇಷ್ಟಲಿಂಗದ ಜೊತೆಗೆ ಸ್ಥಾವರವನ್ನು ಪೂಜೆ ಮಾಡುತ್ತಿದ್ದರು ಎನ್ನುವುದಕ್ಕೆ ವಚನಗಳಲ್ಲಿ ಅನೇಕ ಉದಾಹರಣೆಗಳಿವೆ ಎಂದು ತಿಳಿಸಿದರು.
ವಚನ ಸಾಹಿತ್ಯ ಭಾರತೀಯ ಸಂಸ್ಕೃತಿಯ ಪ್ರತೀಕ . ಭಾರತೀಯ ಆಧ್ಯಾತ್ಮಿಕ ವಿದ್ಯೆಯ ಅಽಕೃತ ದಾಖಲೆ ಎನ್ನಬಹುದು. ವಚನ ಸಾಹಿತ್ಯವನ್ನು ಕರ್ನಾಟಕಕ್ಕೆ, ಕನ್ನಡಕ್ಕೆ ಸೀಮಿತಗೊಳಿಸಿದೆ ಅದನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವಂತಾಗಬೇಕು. ಜಾಗತಿಕ ಮಾನ್ಯತೆ ಪಡೆದ ವಿಶ್ವವಿದ್ಯಾಲಯವೊಂದು ವಚನಗಳ ಸಮಗ್ರ ಅಧ್ಯಯನದ ಜೊತೆಗೆ ವಚನಗಳ ಶಬ್ಧಕೋಶ ಪ್ರಕಟವಾಗಬೇಕು ಎಂದರು.
ಚಿತ್ರದುರ್ಗ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಸಹ ಕಾರ್ಯದರ್ಶಿ ಡಾ. ಶಿವಶರಣ ಗೋಡ್ರಾಳ, ಬಯಲು ವೇದಿಕೆ ಸಂಚಾಲಕ ಡಾ. ಸಂತೋಷಕುಮಾರ ಪಿ.ಕೆ., ವಿವೇಕ ವೇದಿಕೆ ಪ್ರಾಂತ ಸಂಚಾಲಕ ಡಾ. ದುಂಡಪ್ಪ ಬಡಲಕ್ಕಣ್ಣವರ, ವಿವಿ ಕುಲಸಚಿವ ಪ್ರೊ. ಸುರೇಶ ನಾಡಗೌಡ್ರ ಉಪಸ್ಥಿತರಿದ್ದರು. ಕುಲಪತಿ ಡಾ. ವಿಷ್ಣುಕಾಂತ ಚಟಪಲ್ಲಿ ಅಧ್ಯಕ್ಷತೆ ವಹಿಸಿದ್ದರು. ಕೆಎಎಸ್ ಕಾರ್ಯದರ್ಶಿ ರವೀಂದ್ರನಾಥ ದಂಡಿನ ವಂದಿಸಿದರು.