ಗದಗ: ರಾಜ್ಯದ ಕಬ್ಬು ಬೆಳೆಗಾರ ರೈತರಿಂದ ಕಬ್ಬಿನ ದರ ನಿಗದಿಗಾಗಿ ಸೆಪ್ಟಂಬರ್ 26 ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಗದಗ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 2022-23 ನೇ ಸಾಲಿನ ಕಬ್ಬಿನ ಎಫ್ ಆರ್ ಪಿ ದರ ಟನ್‌ಗೆ 3050 ರೂಪಾಯಿ ನಿಗದಿ ಮಾಡಿರುವುದು ನ್ಯಾಯ ಸಮ್ಮತವಲ್ಲ. ಇದನ್ನ ವಿರೋಧಿಸಿ ಪುನರ್ ಪರಿಶೀಲನೆಗಾಗಿ ಒತ್ತಾಯಿಸಿ, ರಾಜ್ಯದ ತಾಲೂಕು, ಜಿಲ್ಲಾಧಿಕಾರಿಗಳ, ಕಚೇರಿಗಳ ಮುಂದೆ ಪ್ರತಿಭಟನ ನಡೆಸಲಾಗಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಆಗಸ್ಟ್ 12ರಂದು ರಸ್ತೆತಡೆ ಚಳವಳಿ ನಡೆಸಿ ಹಕ್ಕೊತ್ತಾಯ ಪತ್ರ ಸಲ್ಲಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಇದು ರಾಜ್ಯದ ರೈತರಿಗೆ ಮಾಡಿದ ಅವಮಾನ. ಸರ್ಕಾರದ ನಿರ್ಲಕ್ಷ್ಯ ತನ ಖಂಡಿಸಿ ರಾಜ್ಯದ ಕಬ್ಬು ಬೆಳೆಗಾರ ರೈತರಿಂದ ಬೃಹತ್ ಸಂಖ್ಯೆಯಲ್ಲಿ ಸೆಪ್ಟಂಬರ್ ನಲ್ಲಿ ವಿಧಾನಸೌಧ ಚಲೋ ನಡೆಸಲಾಗುವುದೆಂದು ತಿಳಿಸಿದರು.
ಕಬ್ಬು ಉತ್ಪಾದನೆಗೆ ಬಳಸುವ ರಸಗೊಬ್ಬರ, ಪೊಟ್ಯಾಶ್, ಡಿಎಪಿ, ಏರಿಕೆಯಾಗಿದೆ. ಕಟಾವು ಕೂಲಿ ಸಾಗಾಣಿಕೆ ವೆಚ್ಚ, ಬೀಜದ ಬೆಲೆ ಏರಿಕೆಯಾಗಿದೆ. ಆದರೆ ಕೇಂದ್ರ ಸರ್ಕಾರ ಸಕ್ಕರೆ ಇಳುವರಿಯನ್ನು10 ರಿಂದ 10.25 ಏರಿಕೆ ಮಾಡಿ 150 ರೂ ಹೆಚ್ಚುವರಿ ಮಾಡಿ ಟನ್‌ಗೆ 3050 ರೂ. ನಿಗದಿ ಮಾಡಿದೆ. ಇದು ಕಬ್ಬು ಬೆಳೆಗಾರರಿಗೆ ಮಾಡಿದ ಅನ್ಯಾಯ.
ಈ ದರ ಪುನರ್ ಪರಿಶೀಲನೆ ಆಗಲೇಬೇಕು.
ಕಬ್ಬಿನಿಂದ ಬರುವ ಸಕ್ಕರೆ ಇಳುವರಿ 10.25 ಕೆ ಏರಿಕೆ ಮಾಡಿ ಕಬ್ಬು ಬೆಳೆ ರೈತರಿಗೆ ದ್ರೋಹ ಬಗೆದಿದೆ. ಇದರಿಂದ ರೈತರಿಗೆ ಟನ್‌ಗೆ
75 ರೂ. ಕಡಿತವಾಗುತ್ತದೆ. ಉತ್ತರಪ್ರದೇಶ ಸರ್ಕಾರದ ಮಾನದಂಡದಂತೆ ಕನಿಷ್ಠ 3500 ರೂ ನಿಗದಿ ಆಗಲೇಬೇಕು,ಕೇಂದ್ರ ಸರ್ಕಾರ ಸಕ್ಕರೆ ಉದ್ದಿಮೆದಾರರ ತಾಳಕ್ಕೆ ತಕ್ಕಂತೆ ಕುಣಿದು ರೈತರಿಗೆ ಅನ್ಯಾಯ ಮಾಡುವುದನ್ನು ನಿಲ್ಲಿಸಬೇಕು.
ಕೇಂದ್ರ ಸರ್ಕಾರ ವಿದ್ಯುತ್ ಖಾಸಗಿಕರಣ ಮಾಡಲು ಸಂಸತ್ತಿನಲ್ಲಿ ಮಂಡನೆ ಮಾಡಿದೆ ಇದನ್ನು ರಾಜ್ಯದ 38 ಲಕ್ಷ ಕೃಷಿ ಪಂಪ್‌ಸೆಟ್ ರೈತರು ವಿರೋಧಿಸುತ್ತೇವೆ. ರೈತರಿಗೆ ಕೃಷಿ ಪಂಪ್ ಸೆಟ್ ಗಳಿಗೆ ನೀಡುವ ಉಚಿತ ವಿದ್ಯುತ್‌ನ್ನು ನಿಲ್ಲಿಸುವ ಹುನ್ನಾರದಿಂದ ಸಂಸತ್ತಲ್ಲಿ 2022 ವಿದ್ಯುತ್ ಬಿಲ್ ಮಂಡಿಸಲಾಗಿದೆ.
ಈಗಾಗಲೇ ತಮಿಳುನಾಡು, ತೆಲಂಗಾಣ, ಆಂಧ್ರ,ಪಂಜಾಬ್, ಕೇರಳ ಬಿಹಾರ್ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆ ಅದರಂತೆ ಕರ್ನಾಟಕ ರಾಜ್ಯವು ಕೂಡ
ವಿದ್ಯುತ್ ಕಾಯ್ದೆ ಖಾಸಗೀಕರಣ ಮಾಡುವುದನ್ನು ವಿರೋಧಿಸಬೇಕು, ಕರ್ನಾಟಕದ ರೈತರನ್ನು ಸಂರಕ್ಷಿಸಬೇಕು ಎಂದರು.
ರಾಜ್ಯಾದ್ಯಂತ ಅತಿವೃಷ್ಟಿ ಮಳೆಹನಿ ಬೆಳೆನಷ್ಟ ದಿಂದ ರೈತರ ಬೆಳೆಗಳು ಅಪಾರ ಹಾನಿಯಾಗಿದೆ . ಸರ್ಕಾರ 7654 ಕೋಟಿ ನಷ್ಟವಾಗಿದೆ ಎಂದು ಹೇಳುತ್ತದೆ ಆದರೆ 250ಕೋಟಿ ಬಿಡುಗಡೆ ಮಾಡುತ್ತದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ಸರ್ಕಾರ ಇಂಥ ನಾಟಕವಾಡುವ ಕಾರ್ಯ ನಿಲ್ಲಿಸಿ ನೈಜ ಅಂದಾಜು ಸಮೀಕ್ಷೆ ಮಾಡಿ ರೈತರ ನೈಜ ನಷ್ಟವನ್ನು ಸಂಪೂರ್ಣವಾಗಿ ಕೂಡಲೇ ರೈತರಿಗೆ ಕೊಡಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಗುಲ್ಬರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹೂಗಾರ್, ವಿಜಯಪುರದ ಧರೆಪ್ಪಗೌಡ ಬೀರದಾರ್ , ಅಂದಪ್ಪ ಕೋಳೂರು ಸಿದ್ದನಗೌಡ ಪಾಟೀಲ್ ಇದ್ದರು.