ಹಾವೇರಿ: ಸಂಕ್ರಾಂತಿ ಹಬ್ಬದ ಸಡಗರದ ನಡುವೆಯೇ ಜಿಲ್ಲೆಯಲ್ಲಿ ಒಂದು ದುರದೃಷ್ಟಕರ ಘಟನೆ ಸಂಭವಿಸಿದೆ. ಹಬ್ಬದ ನಿಮಿತ್ತ ಎತ್ತುಗಳನ್ನು ಮೈತೊಳೆಯಲು ನದಿಗೆ ಇಳಿದಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾವೇರಿ ತಾಲೂಕಿನ ಮಣ್ಣೂರ ಗ್ರಾಮದ ವರದಾ ನದಿಯಲ್ಲಿ ಗುರುವಾರ ನಡೆದಿದೆ.
ಘಟನೆಯ ವಿವರ:
ಮೃತನನ್ನು ಹಾವೇರಿ ತಾಲೂಕಿನ ಹಳೆಮೇಲ್ಮರಿ ಗ್ರಾಮದ ಸಚಿನ್ ಬಸವರಾಜ ಅಂಗಡಿ (22) ಎಂದು ಗುರುತಿಸಲಾಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಹಳೆಮೇಲ್ಮರಿ ಗ್ರಾಮದಿಂದ ಮಣ್ಣೂರ ಗ್ರಾಮದ ಬಳಿ ಹರಿಯುವ ವರದಾ ನದಿಗೆ ಎತ್ತುಗಳನ್ನು ಮೈತೊಳೆಯಲು ಸಚಿನ್ ಬಂದಿದ್ದನು. ಈ ವೇಳೆ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಹಬ್ಬದ ದಿನವೇ ತಾರುಣ್ಯದ ಯುವಕ ಸಾವನ್ನಪ್ಪಿರುವುದು ಹಳೆಮೇಲ್ಮರಿ ಮತ್ತು ಮಣ್ಣೂರ ಗ್ರಾಮಸ್ಥರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.