ರಾಜ್ಯದ ಮಹಿಳಾ ನೌಕರರ ಮನೋಸ್ಥೈರ್ಯ ಹೆಚ್ಚಿಸಲು ಸರ್ಕಾರದ ಮಹತ್ವದ ಹೆಜ್ಜೆ; ತಕ್ಷಣದಿಂದಲೇ ಆದೇಶ ಜಾರಿ
ಬೆಂಗಳೂರು (Bengaluru): ರಾಜ್ಯದ ಲಕ್ಷಾಂತರ ಮಹಿಳಾ ಸರ್ಕಾರಿ ನೌಕರರಿಗೆ (Karnataka Women Government Employees) ಕರ್ನಾಟಕ ಸರ್ಕಾರವು ಮಹತ್ವದ ಮತ್ತು ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದೆ.
ಋತುಚಕ್ರದ ಸಮಯದಲ್ಲಿ (Menstrual Cycle) ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜಾ ಸೌಲಭ್ಯವನ್ನು (Paid Menstrual Leave) ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ಪ್ರತಿ ತಿಂಗಳು ಒಂದು ದಿನದಂತೆ, ವಾರ್ಷಿಕ 12 ದಿನಗಳ ಋತುಚಕ್ರ ರಜೆಯ ಸೌಲಭ್ಯವನ್ನು ಮಂಜೂರು ಮಾಡಲಾಗಿದೆ.
ಋತುಚಕ್ರ ಹೊಂದಿರುವ, 18 ರಿಂದ 52 ವಯಸ್ಸಿನ ಮಹಿಳಾ ಸರ್ಕಾರಿ ನೌಕರರು ಈ ರಜೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರುತ್ತದೆ. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರವೇ ಋತುಚಕ್ರ ರಜೆಯನ್ನು ಸಹ ಮಂಜೂರು ಮಾಡಬಹುದು.
ಈ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅಗತ್ಯವಿಲ್ಲ. ಈ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸತಕ್ಕದ್ದಲ್ಲ. ಅಲ್ಲದೆ, ಈ ರಜೆಯನ್ನು ರಜೆ/ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸತಕ್ಕದ್ದು ಎಂದು ತಿಳಿಸಲಾಗಿದೆ.
ಸರ್ಕಾರಿ ನೌಕರರಿಗೂ ವಿಸ್ತರಣೆ
ಈ ಮೊದಲು, ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 52 ವರ್ಷದ ವಯೋಮಿತಿಯ ಎಲ್ಲಾ ಖಾಯಂ/ಗುತ್ತಿಗೆ/ಹೊರಗುತ್ತಿಗೆ ಮಹಿಳಾ ನೌಕರರಿಗೆ ವಾರ್ಷಿಕ 12 ದಿನಗಳ ವೇತನ ಸಹಿತ ಋತುಚಕ್ರ ರಜೆಯನ್ನು ಮಂಜೂರು ಮಾಡಲಾಗಿತ್ತು. ಇದೀಗ, ಈ ಸೌಲಭ್ಯವನ್ನು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೂ ಕಲ್ಪಿಸಲು ಸರ್ಕಾರವು ತೀರ್ಮಾನಿಸಿ ಆದೇಶ ಹೊರಡಿಸಿದೆ.