ಗದಗ: ಗದಗ ತಹಶೀಲ್ದಾರ್ ಕಚೇರಿಯ ಆವರಣದಲ್ಲಿಯೇ ಉಪ ತಹಶೀಲ್ದಾರ್ ಮತ್ತು ಅವರ ಬೆಂಬಲಿಗರು ಯುವಕನೊಬ್ಬನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಈ ಅಮಾನವೀಯ ಕೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹಲ್ಲೆಗೆ ನಿಖರವಾದ ಕಾರಣ ಮತ್ತು ಯಾರೆಲ್ಲಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ಕಾಂಗ್ರೆಸ್ಸಿನ ಪ್ರಭಾವಿ ವ್ಯಕ್ತಿಯೊಬ್ಬರು ಮುಂದೆ ನಿಂತು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ವಿಡಿಯೋದಲ್ಲಿ ಉಪ ತಹಶೀಲ್ದಾರರೇ ಖುರ್ಚಿಯೊಂದನ್ನು ಎತ್ತಿಕೊಂಡು ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಈ ವೇಳೆ ಅಲ್ಲಿದ್ದ ಕೆಲವರು ತಕ್ಷಣವೇ ಮಧ್ಯಪ್ರವೇಶಿಸಿ ಉಪ ತಹಶೀಲ್ದಾರರಿಂದ ಖುರ್ಚಿಯನ್ನು ಕಿತ್ತುಕೊಂಡಿದ್ದಾರೆ. ಆದರೂ ಸಹ, ಉಪ ತಹಶೀಲ್ದಾರರು ಕೈಯಿಂದ ಹಲ್ಲೆ ಮಾಡುವುದನ್ನು ಮುಂದುವರೆಸಿದ್ದಾರೆ.

  • ಯುವಕನ ಮೇಲೆ ಹಲ್ಲೆ ನಡೆಸಲು ಕಾರಣವೇನು?
  • ಯುವಕನು ಮಾಡಿದ ತಪ್ಪೇನು?
  • ಈ ಗಂಭೀರ ಹಲ್ಲೆಗೆ ಹಿಂದಿನ ದ್ವೇಷವೇನಾದರೂ ಇತ್ತೇ?
  • ಅಷ್ಟು ತಡರಾತ್ರಿಯವರೆಗೂ ಉಪ ತಹಶೀಲ್ದಾರ್ ಕಚೇರಿಯಲ್ಲಿ ಬೇರೆಯವರಿಗೆ ಏನು ಕೆಲಸವಿತ್ತು? ಈ ಬಗ್ಗೆ ತನಿಖೆಯಾಗಬೇಕಿದೆ.