ಬಾಗಲಕೋಟೆ: ಶಾಸಕ ಲಿಂಬಾವಳಿ ಅವರದ್ದು ಆಚಾರವಿಲ್ಲದ ನಾಲಿಗೆ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಅರವಿಂದ ಲಿಂಬಾವಳಿ ಕ್ಷೇತ್ರದ ಮಹಿಳೆ ಜೊತೆ ಅಸಭ್ಯ ವರ್ತನೆ ಮಾಡಿದ್ದಾರೆ. ರಾಜ ಕಾಲುವೆ ಒತ್ತುವರಿ ಕುರಿತು ಮನವಿ ನೀಡಲು ಬಂದ ಮಹಿಳೆಯನ್ನು ತಳ್ಳಿ ಹಲ್ಲೆ ನಡೆಸಿದ್ದಾರೆ. ಏಕವಚನದಲ್ಲಿ ಹೋಗೆ, ಬಾರೇ ಅನ್ನೋ ಪದ ಬಳಸಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಘಟನೆ ಕುರಿತು ಮಾಧ್ಯಮದವರು ಲಿಂಬಾವಳಿ ಅವರನ್ನು ಪ್ರಶ್ನಿಸಿದಾಗ, ನಾನೇನು ರೇಪ್ ಮಾಡಿದ್ದೀನಾ ಎಂದು ಕೆಟ್ಟ ಪದ ಬಳಸಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅವರ ಸಂಸ್ಕೃತಿ ತೋರಿಸುತ್ತದೆ. ಇಂಥ ಆಚಾರವಿಲ್ಲದ ಶಾಸಕರ ರಾಜೀನಾಮೆ ಪಡೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಆಗ್ರಹಿಸುವೆ ಎಂದರು.

ಬಿಜೆಪಿ ಪಕ್ಷದಲ್ಲಿ ಮಹಿಳೆಯರಿಗೆ ಅವಮಾನ ಮಾಡೋದು ಹೊಸದೇನಲ್ಲ. ಜಾರಕಿಹೊಳಿ ಅವರಿಂದ ಮಹಿಳೆ ಮೇಲೆ ಆದ ಅತ್ಯಾಚಾರದ ಬಗ್ಗೆ ನೋಡಿದ್ದೇವೆ. ಮೈಸೂರಿನಲ್ಲಿ ಅತ್ಯಾಚಾರವಾದ ಮಹಿಳೆಗೆ ಗೃಹ ಸಚಿವರು ಕೇಳ್ತಾರೆ ಅಷ್ಟೊತ್ತಲಿ ಅಲ್ಲಿಗೆ ಯಾಕೆ ಹೊಗಿದ್ದು ಎಂದು. ಹೀಗೆ ಬಿಜೆಪಿಯವ್ರು ಮಹಿಳೆಯರ ಬಗ್ಗೆ ಅನೇಕ ಬಾರಿ ಹಗುರವಾಗಿ ಮಾತನಾಡ್ತಿದ್ದಾರೆ. ಮೊದಲು ಹಗುರವಾಗಿ ಮಾತನಾಡುವರ ನಾಲಿಗೆಗೆ ಲಗಾಮ್ ಹಾಕಬೇಕು ಎಂದರು.