ಬೆಂಗಳೂರು: ರಮೇಶ್ ಜಾರಕಿಹೊಳಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಪಕ್ಷದವರು ಉತ್ತಮ ಚಿಕಿತ್ಸೆ ಕೊಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ಸೋಮವಾರ(ಜನವರಿ 30) ದಂದು ಬೆಳಗಾವಿಯ ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್‌ ಅವರದ್ದು ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದ ರಮೇಶ್‌ ಜಾರಕಿಹೊಳಿ ರಾಜಕೀಯವಾಗಿ ಮುಗಿಸುವುದಾಗಿ ತಿಳಿಸಿದ್ದರು.

ಆ‌ ಹೇಳಿಕೆ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ‘ಐ ವಿಶ್ ಹಿಮ್ ಆಲ್ ದಿ ಬೆಸ್ಟ್’ ಎಂದು ತಿರುಗೇಟು ನೀಡಿದ್ದಾರೆ.

ಅವರ ಮಾತು ಕೇಳಿ ನನಗೆ ಅಯ್ಯೋ ಅನಿಸುತ್ತದೆ. ಸಿಡಿ ಪ್ರಕರಣವನ್ನು ಸಿಬಿಐಗೆ ಕೊಟ್ಟು ಯಾವ ತನಿಖೆಯಾದರೂ ಮಾಡಿಸಿಕೊಳ್ಳಲಿ. ತಡೆದವರ್ಯಾರು, ನಾನು ಅವರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಅದರ ಕುರಿತು ‌ನನಗೆ ಅವಶ್ಯಕತೆಯಿಲ್ಲ ಎಂದರು.

ಭಾರತ ಜೋಡೋ ಯಾತ್ರೆ ಸಮಾರೋಪ ಕಾರ್ಯಕ್ರಮ ಬಹಳ ಉತ್ತಮವಾಗಿ ಆಗಿದೆ. ನಾನು‌ ಸಮಾರೋಪ ಸಮಾರಂಭಕ್ಕೆ ಕಾಶ್ಮೀರಕ್ಕೆ ಹೋಗಿದೆ. ನಮ್ಮ ರಾಜ್ಯದಲ್ಲೂ ಭಾರತ ಜೋಡೊ ಯಾತ್ರೆ ಚೆನ್ನಾಗಿ ಆಗಿದೆ ಅಂತ ಸ್ಮರಿಸಿಕೊಂಡರು. ಇದು ನಮ್ಮ ಎಲ್ಲಾ ಕಾರ್ಯಕರ್ತರ ಶ್ರಮವಾಗಿದೆ ಎಂದು ತಿಳಿಸಿದರು.

ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರತ್ ಜೋಡೋ ಯಾತ್ರೆ ಜೀವ ತುಂಬಿದೆ. ಇನ್ನೂ ನನಗೂ ಕಾಶ್ಮೀರದಲ್ಲಿ ಮೊದಲ ಅನುಭವ. ಇಲ್ಲಿ ಮಳೆಗಾಲದಲ್ಲಿ ಮಳೆ ಬರುವ ರೀತಿಯಲ್ಲಿ ಕಾಶ್ಮೀರದಲ್ಲಿ ಹಿಮ ಬೀಳುತ್ತಿರುತ್ತದೆ‌ ಎಂದರು.