ಗದಗ: ಮಾಜಿ ಸಚಿವ ಬಿ. ಶ್ರೀರಾಮುಲು ಅವರು ತಾವು ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತೆ ಒಂದಾಗುವುದಾಗಿ ಸ್ಪಷ್ಟಪಡಿಸಿದ್ದಾರೆ. ಇವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದ ಶ್ರೀರಾಮುಲು, ಪಕ್ಷದ ಹಿತದೃಷ್ಟಿಯಿಂದ ರಾಜಕೀಯವಾಗಿ ಒಂದಾಗುವುದು ಅನಿವಾರ್ಯ ಎಂದು ತಿಳಿಸಿದರು.

ಗುರುವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, “ನಾನು ಮತ್ತು ಜನಾರ್ದನ ರೆಡ್ಡಿ ಒಂದಾಗುತ್ತೇವೆ. ನಮ್ಮಿಬ್ಬರ ನಡುವೆ ಯಾವುದೇ ಗೊಂದಲಗಳಿಲ್ಲ. ಅಂದಿನ ಪರಿಸ್ಥಿತಿಯಲ್ಲಿ ಜನಾರ್ದನ ರೆಡ್ಡಿ ಒಂದು ಮಾತು ಹೇಳಿದರು, ನಾನೊಂದು ಮಾತಾಡಿದೆ, ಅಷ್ಟೇ ಬಿಟ್ಟರೆ ಏನೂ ಇಲ್ಲ” ಎಂದು ಸ್ಪಷ್ಟಪಡಿಸಿದರು.

‘ಸಂಧಾನದ ಅಗತ್ಯವಿಲ್ಲ, ನಮ್ಮಲ್ಲಿ ಸ್ವಾರ್ಥವಿಲ್ಲ’
ರೆಡ್ಡಿ ಮತ್ತು ತಮ್ಮ ನಡುವೆ ಸಂಧಾನದ ಅಗತ್ಯವಿಲ್ಲ ಎಂದು ಒತ್ತಿಹೇಳಿದ ಶ್ರೀರಾಮುಲು, “ನಮ್ಮಲ್ಲಿ ಸ್ವಾರ್ಥ ಇಲ್ಲ. ಪಕ್ಷದ ಹಿತದೃಷ್ಟಿಯಿಂದ ರಾಜಕೀಯವಾಗಿ ಒಂದಾಗುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಂದಿನ ಪರಿಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಬಾಯಿ ಮಾಡಿಕೊಂಡಿದ್ದು ನಿಜ. ಅದರ ನಂತರ ಯಾವುದೇ ಹೇಳಿಕೆ ಕೊಟ್ಟಿಲ್ಲ” ಎಂದರು.

‘ಹಳೆಯದೆಲ್ಲ ಮರೆತು, ಬಿಜೆಪಿ ಅಧಿಕಾರಕ್ಕೆ ತರಲು ಒಗ್ಗಟ್ಟು’
ಹಿಂದಿನ ಭಿನ್ನಾಭಿಪ್ರಾಯಗಳನ್ನು ಮರೆತು ಮುನ್ನಡೆಯುವ ಮಹತ್ವವನ್ನು ಶ್ರೀರಾಮುಲು ಪ್ರತಿಪಾದಿಸಿದರು. “ಆ ದಿನ ನಾನು ಮಾತನಾಡಿದ್ದು ತಪ್ಪು, ಅವರು (ಜನಾರ್ದನ ರೆಡ್ಡಿ) ಮಾತಾಡಿದ್ದು ತಪ್ಪು. ಆವತ್ತಿನ ಬೆಳವಣಿಗೆ ಎಲ್ಲವೂ ಮರೆತು ಹೋಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಮತ್ತೆ ನಾವೆಲ್ಲಾ ಒಂದಾಗಬೇಕಿದೆ. ನಮ್ಮ ವೈಯಕ್ತಿಕ ಏನೇ ಇರಲಿ, ಅದನ್ನು ಮರೆತು ಒಂದಾಗಬೇಕು. ಜನರಲ್ಲಿ ಭರವಸೆ ತುಂಬಬೇಕು ಎಂದರೆ ನಾವು ಒಂದಾಗಬೇಕು” ಎಂದು ಹೇಳಿದರು.

“ರೆಡ್ಡಿ-ರಾಮುಲು ಮಾತ್ರವಲ್ಲ, ರಾಜ್ಯದಲ್ಲಿ ಎಲ್ಲರನ್ನೂ ಒಂದು ಮಾಡುವೆ. ಒಂದಾಗಿ ಚುನಾವಣೆ ಎದುರಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.