ಬೆಂಗಳೂರು: ಗಣಿಗಾರಿಕೆಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಮತ್ತು ಅವುಗಳ ಶೀಘ್ರ ಇತ್ಯರ್ಥಕ್ಕೆ ಸೂಕ್ತ ಕ್ರಮಗಳನ್ನು ಶಿಫಾರಸು ಮಾಡಲು ಕರ್ನಾಟಕ ಸರ್ಕಾರವು ಉನ್ನತ ಮಟ್ಟದ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿದೆ.

2025ರ ಜುಲೈ 5ರಂದು ಹೊರಡಿಸಲಾದ ಅಧಿಕೃತ ಜ್ಞಾಪನದ ಪ್ರಕಾರ, ಈ ಸಮಿತಿಯು ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಸೂಲಾತಿ ಆಯುಕ್ತರನ್ನು ನೇಮಕ ಮಾಡುವ ಮತ್ತು ತ್ವರಿತ ನ್ಯಾಯಾಲಯಗಳನ್ನು (Fast Track Courts) ಸ್ಥಾಪಿಸುವ ಕುರಿತು ಚರ್ಚಿಸಿ, ಶಿಫಾರಸುಗಳನ್ನು ನೀಡಲಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಗೃಹ ಸಚಿವರಾದ ಡಾ.ಜಿ. ಪರಮೇಶ್ವರ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಶ ಕೆ.ಹೆಚ್. ಮುನಿಯಪ್ಪ, ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ, ಹಾಗೂ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.

ಈ ಉಪ ಸಮಿತಿಯು 2025ರ ಜುಲೈ 2ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದ (ಸಚಿವ ಸಂಪುಟ ನಿರ್ಣಯ ಸಂಖ್ಯೆ: 2.524/2025) ಅನ್ವಯ ರಚನೆಯಾಗಿದೆ. ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ನಿಯಮ 13(5) ಮತ್ತು ಸುತ್ತೋಲೆ ಸಂಖ್ಯೆ: ಡಿಸಿಎ(ಎಂ): 98/2001, ದಿನಾಂಕ: 29.03.2001ರ ಪ್ರಕಾರ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ)ಯು ಈ ಸಮಿತಿಗೆ ಅಗತ್ಯ ನೆರವು ನೀಡಲಿದೆ.

ಅಕ್ರಮ ಗಣಿಗಾರಿಕೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಸರ್ಕಾರದ ಬದ್ಧತೆಯನ್ನು ಈ ಸಮಿತಿ ರಚನೆ ಎತ್ತಿ ತೋರಿಸುತ್ತದೆ. ಉಪ ಸಮಿತಿಯು ತನ್ನ ವರದಿಯನ್ನು ಒಂದು ತಿಂಗಳ ಒಳಗಾಗಿ ಸಲ್ಲಿಸಬೇಕು. ಸರ್ಕಾರದ ಅಪರ ಕಾರ್ಯದರ್ಶಿ (ಸಚಿವ ಸಂಪುಟ) ಆರ್. ಚಂದ್ರಶೇಖರ್ ಅವರು ಈ ಕುರಿತು ಅಧಿಕೃತ ಜ್ಞಾಪನವನ್ನು ಹೊರಡಿಸಿದ್ದಾರೆ.