ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಮತ್ತು ಕಲಿಕಾ ಫಲಿತಾಂಶಗಳನ್ನು ಹೆಚ್ಚಿಸಲು, ಕರ್ನಾಟಕ ಸರ್ಕಾರವು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಶಾಲಾ ಸಮಯದಲ್ಲಿ ಶಾಲೆಯಲ್ಲೇ ಹಾಜರಿರುವುದನ್ನು ಕಡ್ಡಾಯಗೊಳಿಸಿ ಹೊಸ ಸುತ್ತೋಲೆಯನ್ನು ಹೊರಡಿಸಿದೆ.

ಜುಲೈ 1, 2025 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರು ಈ ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ.

ಪ್ರಮುಖ ನಿರ್ದೇಶನಗಳು
ತರಬೇತಿ, ಸಭೆಗಳಿಗೆ ನಿರ್ಬಂಧ: ಶಾಲಾ ದಿನಗಳಲ್ಲಿ, ಶಾಲಾ ಸಮಯದಲ್ಲಿ ಯಾವುದೇ ಶಿಕ್ಷಕರನ್ನು ಅಥವಾ ಮುಖ್ಯೋಪಾಧ್ಯಾಯರನ್ನು ತರಬೇತಿ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಸಭೆಗಳು ಅಥವಾ ಇತರೆ ಚಟುವಟಿಕೆಗಳಿಗೆ ನಿಯೋಜಿಸುವುದನ್ನು ನಿಷೇಧಿಸಲಾಗಿದೆ.

ಮೌಖಿಕ ಅಥವಾ ಲಿಖಿತ ಆದೇಶಗಳ ಮೂಲಕವೂ ಇದಕ್ಕೆ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಹ ಇಂತಹ ನಿರ್ದೇಶನಗಳನ್ನು ನೀಡಬಾರದು ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ.

ಸಭೆಗಳು ಮತ್ತು ವಿಡಿಯೋ ಕಾನ್ಫರೆನ್ಸ್ ಇಲ್ಲ: ಶಾಲಾ ಸಮಯದಲ್ಲಿ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರ ಯಾವುದೇ ಸಭೆಗಳನ್ನು ಕರೆಯುವುದಾಗಲೀ ಅಥವಾ ವಿಡಿಯೋ ಕಾನ್ಫರೆನ್ಸ್ ಮಾಡುವುದಾಗಲೀ ನಿಷಿದ್ಧ. ಶಾಲೆಗಳಿಗೆ ಭೇಟಿ ನೀಡುವ ಅಧಿಕಾರಿಗಳು ತರಗತಿಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು.

ವಿದ್ಯಾರ್ಥಿಗಳಿಗೆ ಪ್ರೇಕ್ಷಕರಾಗಲು ನಿರ್ಬಂಧ: ಯಾವುದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಯ ಹೊರಗಡೆ ನಡೆಯುವ ಕಾರ್ಯಕ್ರಮಗಳಿಗೆ ಪ್ರೇಕ್ಷಕರಾಗಿ ಕರೆದುಕೊಂಡು ಹೋಗಲು ಅಥವಾ ಭಾಗವಹಿಸಲು ನಿರ್ದೇಶಿಸಬಾರದು.

ಬಾಹ್ಯ ಪರೀಕ್ಷೆಗಳಿಗೆ ಬ್ರೇಕ್:
ಶಾಲಾ ದಿನಗಳಲ್ಲಿ ಶಾಲಾ ಆವರಣದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (KPSC) ಅಥವಾ ಇತರೆ ರಾಜ್ಯ/ಕೇಂದ್ರ ಸರ್ಕಾರ/ಖಾಸಗಿ ಸಂಸ್ಥೆಗಳು ನಡೆಸುವ ಯಾವುದೇ ಬಾಹ್ಯ ಪರೀಕ್ಷೆಗಳನ್ನು ನಡೆಸಬಾರದು.

ಈ ನಿಯಮವನ್ನು ಉಲ್ಲಂಘಿಸಿದರೆ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಪ್ರಾಂಶುಪಾಲರು, ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಅಂತಹ ಪರೀಕ್ಷೆಗಳನ್ನು ನಡೆಸಬೇಕಾದಲ್ಲಿ ಸಾರ್ವಜನಿಕ ರಜೆ ಅಥವಾ ಬೇಸಿಗೆ ರಜೆಯ ಸಮಯದಲ್ಲಿ ಮಾತ್ರ ನಡೆಸಬೇಕು.

ಡೇಟಾ ಎಂಟ್ರಿಗೆ ನಿರ್ಬಂಧ ಯಾವುದೇ ಖಾಸಗಿ ಸಂಸ್ಥೆಗಳು ಅಥವಾ ಜ್ಞಾನ ಪಾಲುದಾರರ ಸಾಫ್ಟ್‌ವೇರ್‌ಗಳಲ್ಲಿ ಡೇಟಾ ಎಂಟ್ರಿ ಮಾಡುವಂತೆ ಶಿಕ್ಷಕರು ಅಥವಾ ಮುಖ್ಯೋಪಾಧ್ಯಾಯರಿಗೆ ಮೌಖಿಕ ಅಥವಾ ಲಿಖಿತ ಆದೇಶ ನೀಡಬಾರದು. ಇಂತಹ ಆದೇಶ ನೀಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.