ಬೆಂಗಳೂರು: ರಾಜ್ಯದ ಒಟ್ಟು 240 ತಾಲ್ಲೂಕುಗಳ ಪೈಕಿ 2017-18ರಿಂದ ಹೊಸದಾಗಿ ರಚನೆಯಾದ 63 ತಾಲ್ಲೂಕುಗಳಲ್ಲಿ, ಈವರೆಗೆ ಕಚೇರಿ ನಿರ್ಮಾಣ ಮಂಜೂರಾಗದ 49 ತಾಲ್ಲೂಕುಗಳಿಗೆ ‘ಪ್ರಜಾಸೌಧ’ಗಳನ್ನು ಮಂಜೂರು ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಹಿಂದಿನ “ತಾಲ್ಲೂಕು ಆಡಳಿತಸೌಧ” ಎಂಬ ನಾಮಾಂಕಿತವನ್ನು “ತಾಲ್ಲೂಕು ಪ್ರಜಾಸೌಧ” ಎಂಬುದಾಗಿಯೂ, ಹಾಗೂ “ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ” ಎಂಬ ನಾಮಾಂಕಿತವನ್ನು “ಜಿಲ್ಲಾ ಪ್ರಜಾಸೌಧ” ಎಂಬುದಾಗಿಯೂ ಬದಲಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹೊಸ ತಾಲ್ಲೂಕುಗಳ ಸಕ್ರಿಯ ಕಾರ್ಯನಿರ್ವಹಣೆಗೆ ಮತ್ತು ಆ ತಾಲ್ಲೂಕುಗಳ ಜನರ ನಿರೀಕ್ಷೆಗಳನ್ನು ಈಡೇರಿಸಲು ಈ ಪ್ರಜಾಸೌಧಗಳ ನಿರ್ಮಾಣವು ಅತ್ಯಗತ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ.
ಪ್ರಜಾಸೌಧ ಮಂಜೂರಾದ ತಾಲ್ಲೂಕುಗಳ ಪಟ್ಟಿ:
- ಕಲಬುರಗಿ ಜಿಲ್ಲೆ: ಕಾಳಗಿ, ಕಮಲಾಪುರ, ಯಡ್ರಾಮಿ, ಶಹಬಾದ್
- ಬೀದರ್ ಜಿಲ್ಲೆ: ಚಿಟಗುಪ್ಪ, ಹುಲಸೂರು, ಕಮಲಾನಗರ
- ಕೊಪ್ಪಳ ಜಿಲ್ಲೆ: ಕುಕನೂರು, ಕನಕಗಿರಿ, ಕಾರಟಗಿ
- ಯಾದಗಿರಿ ಜಿಲ್ಲೆ: ವಡಗೆರಾ, ಗುರುಮಿಠಕಲ್, ಹುಣಸಗಿ
- ರಾಯಚೂರು ಜಿಲ್ಲೆ: ಮಸ್ಕಿ, ಸಿರವಾರ, ಅರಕೇರಾ
- ವಿಜಯನಗರ ಜಿಲ್ಲೆ: ಕೊಟ್ಟೂರು
- ಕೊಡಗು ಜಿಲ್ಲೆ: ಕುಶಾಲನಗರ, ಪೊನ್ನಂಪೇಟೆ
- ಬೆಂಗಳೂರು ದಕ್ಷಿಣ ಜಿಲ್ಲೆ: ಹಾರೋಹಳ್ಳಿ
- ಬೆಳಗಾವಿ ಜಿಲ್ಲೆ: ಕಾಗವಾಡ, ಮೂಡಲಗಿ, ಯರಗಟ್ಟಿ, ನಿಪ್ಪಾಣಿ
- ಧಾರವಾಡ ಜಿಲ್ಲೆ: ಅಳ್ಳಾವರ, ಅಣ್ಣಿಗೇರಿ, ಹುಬ್ಬಳ್ಳಿನಗರ
- ಮೈಸೂರು ಜಿಲ್ಲೆ: ಸರಗೂರು, ಸಾಲಿಗ್ರಾಮ
- ಬಾಗಲಕೋಟೆ ಜಿಲ್ಲೆ: ಇಳಕಲ್, ಗುಳೇದಗುಡ್ಡ, ರಬಕವಿ-ಬನಹಟ್ಟಿ, ತೇರದಾಳ, ನಿಡಗುಂದಿ
- ಗದಗ ಜಿಲ್ಲೆ: ಗಜೇಂದ್ರಗಡ, ಲಕ್ಷ್ಮೇಶ್ವರ
- ಹಾವೇರಿ ಜಿಲ್ಲೆ: ರಟ್ಟಿಹಳ್ಳಿ
- ವಿಜಯಪುರ ಜಿಲ್ಲೆ: ತಾಳಿಕೋಟೆ, ದೇವರಹಿಪ್ಪರಗಿ, ಚಡಚಣ, ಆಲಮೇಲ
- ಕೋಲಾರ ಜಿಲ್ಲೆ: ಕೋಲಾರ
- ಚಿಕ್ಕಮಗಳೂರು ಜಿಲ್ಲೆ: ಕಳಸ, ಅಜ್ಜಂಪುರ
- ಚಾಮರಾಜನಗರ ಜಿಲ್ಲೆ: ಹನೂರು
- ಚಿಕ್ಕಬಳ್ಳಾಪುರ ಜಿಲ್ಲೆ: ಚೇಳೂರು, ಮಂಚೇನಹಳ್ಳಿ
- ದಾವಣಗೆರೆ ಜಿಲ್ಲೆ: ನ್ಯಾಮತಿ
- ದಕ್ಷಿಣ ಕನ್ನಡ ಜಿಲ್ಲೆ: ಉಳ್ಳಾಲ
- ಜಿಲ್ಲಾ ಪ್ರಜಾಸೌಧಗಳ ಮಾಹಿತಿ:
ಬೀದರ್ ಜಿಲ್ಲಾ ಪ್ರಜಾಸೌಧವನ್ನು 48.32 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ವಿಜಯಪುರ ಜಿಲ್ಲಾ ಪ್ರಜಾಸೌಧವನ್ನು 55.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಳೆದ 2 ವರ್ಷಗಳಲ್ಲಿ ರಾಯಚೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾ ಪ್ರಜಾಸೌಧ ಆಡಳಿತ ಕೇಂದ್ರ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡಿವೆ. ಚಿಕ್ಕಮಗಳೂರು ಜಿಲ್ಲಾಡಳಿತ ಕೇಂದ್ರ ಕಟ್ಟಡದ ಮೊದಲನೇ ಹಂತಕ್ಕೆ 3000.00 ಲಕ್ಷ ರೂ. ಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಎರಡನೇ ಹಂತದ ಕಾಮಗಾರಿಯ ಅಂದಾಜು ಮೊತ್ತ 2648.11 ಲಕ್ಷ ರೂ. ಸೇರಿದಂತೆ ಒಟ್ಟು ಪರಿಷ್ಕೃತ ಅಂದಾಜು ಮೊತ್ತ 5648.11 ಲಕ್ಷ ರೂ. ಗಳಿಗೆ ಲೋಕೋಪಯೋಗಿ ಇಲಾಖೆಯ ಪರಿಷ್ಕೃತ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಅನುಮೋದನೆ ದೊರೆತಿದೆ.