ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ  2025-26ನೇ ಶೈಕ್ಷಣಿಕ ಸಾಲಿಗೆ 51,000 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಲು ಕರ್ನಾಟಕ ಸರ್ಕಾರ ಹಸಿರು ನಿಶಾನೆ ತೋರಿದೆ.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಬಂದ ಪ್ರಸ್ತಾವನೆಯ ಆಧಾರದ ಮೇಲೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅತಿಥಿ ಶಿಕ್ಷಕರ ನೇಮಕಾತಿ ಅನಿವಾರ್ಯ ಎಂದು ಸರ್ಕಾರ ಮನಗಂಡಿದೆ.

ವಿಶೇಷವಾಗಿ, ಶಾಲಾ ಪ್ರಾರಂಭದ ದಿನವೇ ಶಿಕ್ಷಕರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಬೋಧನಾ ಪ್ರಕ್ರಿಯೆಗೆ ಅನುಕೂಲವಾಗುವಂತೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.

ಈ ಆದೇಶದ ಅನ್ವಯ, 40,000 ಅತಿಥಿ ಶಿಕ್ಷಕರನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮತ್ತು 11,000 ಅತಿಥಿ ಶಿಕ್ಷಕರನ್ನು ಸರ್ಕಾರಿ ಪ್ರೌಢಶಾಲೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು.

ಈ ನೇಮಕಾತಿಯು ಖಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ ಎಂಬ ಷರತ್ತಿಗೊಳಪಟ್ಟಿರುತ್ತದೆ.

ಈ ನಿರ್ಧಾರಕ್ಕೆ ಆರ್ಥಿಕ ಇಲಾಖೆಯೂ ಸಹಮತಿ ನೀಡಿದ್ದು, ನೇಮಕಗೊಳ್ಳುವ 51,000 ಅತಿಥಿ ಶಿಕ್ಷಕರ ಗೌರವಧನ ಪಾವತಿಗೆ ಅಗತ್ಯವಿರುವ ಅನುದಾನದ ವಿವರ ಮತ್ತು ಜಿಲ್ಲಾ/ತಾಲ್ಲೂಕುವಾರು ವಿವರಗಳೊಂದಿಗೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ.