ಗದಗ: ಉಪ ತಹಶೀಲ್ದಾರ್ ಡಿ.ಟಿ. ವಾಲ್ಮೀಕಿ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ, ಅವರನ್ನು ಮತ್ತೆ ಸರ್ಕಾರಿ ಸೇವೆಗೆ ನಿಯೋಜಿಸುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಗದಗ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆ, ಗದಗ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಲ್ಲಿಸಿರುವ ಮನವಿಯಲ್ಲಿ, ಡಿ.ಟಿ. ವಾಲ್ಮೀಕಿ ಅವರು ಸಂಘದ ನಿರ್ದೇಶಕರು ಹಾಗೂ ರಾಜ್ಯ ಪರಿಷತ್ ಸದಸ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮೇ 17, 2025 ರಂದು ಗದಗ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವಾಲ್ಮೀಕಿ ಅವರನ್ನು ಅಮಾನತುಗೊಳಿಸಲಾಗಿದೆ. ಆದರೆ, ಈ ಘಟನೆಯಲ್ಲಿ ಅವರ ಪಾತ್ರ ಮೇಲ್ನೋಟಕ್ಕೆ ಕಂಡುಬಂದರೂ, ಅದು ಅನಿರೀಕ್ಷಿತವಾಗಿ ನಡೆದ ಘಟನೆಯಾಗಿದ್ದು, ಅದರಲ್ಲಿ ಅವರ ಪಾತ್ರ ಇರುವುದಿಲ್ಲ ಎಂದು ಸಂಘವು ಪ್ರತಿಪಾದಿಸಿದೆ.
ಆದ್ದರಿಂದ, ವಾಲ್ಮೀಕಿ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ, ಅವರನ್ನು ಮತ್ತೆ ಸರ್ಕಾರಿ ಕೆಲಸಕ್ಕೆ ನಿಯೋಜಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಅವರು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದ್ದಾರೆ.