ಗದಗ (gadag): ತೋಂಟದಾರ್ಯ ಮಠದ ಮುಂದಿನ ರಸ್ತೆ ಮಠಕ್ಕೆ ಸೇರಿದ್ದು ಎಂದು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಗರಸಭೆ ಅಧಿಕಾರಿಗಳೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ನಗರಸಭೆ ಪೌರಾಯುಕ್ತರು ಮತ್ತು ಜಿಲ್ಲಾಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ಶ್ರೀರಾಮ ಸೇನೆ ಮುಖಂಡ ರಾಜು ಖಾನಪ್ಪನವರ ತಿಳಿಸಿದರು.

ಶ್ರೀಮಠದ ಭಕ್ತರು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮತ್ತು ರಥಬೀದಿ ಮಾಲೀಕತ್ವದ ವಿಚಾರವಾಗಿ ನಡೆದ ಸಭೆಯ ಕುರಿತು ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಠದ ಮುಂದಿನ ರಸ್ತೆ ಮಠಕ್ಕೆ ಸೇರಿದ್ದು ಎಂದು ಅಧಿಕಾರಿಗಳು ಹೇಳಿರುವುದು ನೋಡಿದರೆ, ಅವರೆಲ್ಲರೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅನುಮಾನಗಳು ಮೂಡುತ್ತವೆ ಎಂದು ಆರೋಪಿಸಿದರು.

ತೋಂಟದಾರ್ಯ ಮಠದ ಮುಂದಿನ ರಸ್ತೆ ಮಠಕ್ಕೆ ಸೇರಿದ್ದಾದರೆ ಅಲ್ಲಿ ನಗರಸಭೆ ರಸ್ತೆ ನಿರ್ಮಾಣ ಮಾಡಿದ್ದು ಏಕೆ? ಪ್ರತಿನಿತ್ಯ ನಗರಸಭೆ 15-20 ಜನ ಪೌರಕಾರ್ಮಿಕರು ಕಸ ಹೊಡೆಯುವುದು ಯಾವ ಕಾರಣಕ್ಕೆ? ಜಾಗವನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಬಿಟ್ಟುಕೊಟ್ಟ ರಸ್ತೆಯನ್ನು ಸ್ವಂತದ್ದು ಎಂದು ಭಾವಿಸುವುದಾದರೆ, ನಾಳೆ ಇನ್ಯಾರೋ ಅದೇ ರೀತಿ ಜಾತ್ರೆ ನಡೆಸಿದರೂ ಅಚ್ಚರಿಪಡಬೇಕಾಗಿಲ್ಲ ಎಂದು ಆರೋಪಿಸಿದರು.

2016ರಿಂದಲೂ ಮಠದ ಮುಂದಿನ ರಸ್ತೆಯಲ್ಲಿ ಜಾತ್ರೆ ನೆಪದಲ್ಲಿ ನಡೆಯುವ ವ್ಯಾಪಾರವನ್ನು ವಿರೋಧಿಸುತ್ತಲೆ ಬಂದಿದ್ದೆವೆ. ಆ ರಸ್ತೆ ನಗರಸಭೆಗೆ ಸೇರಿದ್ದು ಎಂದು ಈ ಹಿಂದಿನ ಅಧಿಕಾರಿಗಳು ದಾಖಲೆ ಕೊಟ್ಟಿದ್ದಾರೆ. ರಸ್ತೆಯನ್ನು ನಿರ್ಮಿಸಿದ್ದು ನಾವೇ ಎಂದು ಒಪ್ಪಿಕೊಂಡಿದ್ದಾರೆ. ಈಗ ಏಕಾಏಕಿ ರಸ್ತೆ ಮಠಕ್ಕೆ ಸೇರಿದ್ದು ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಕಾನೂನು ಹೋರಾಟ ನಡೆಸುತ್ತೆವೆ ಎಂದು ಎಚ್ಚರಿಸಿದರು.