ಗದಗ: ಸರ್ಕಾರಿ ನೌಕರರು ತಮ್ಮಗೆ ಒದಗಿದ ಅವಕಾಶವನ್ನು ಸದ್ಭಳಕೆ ಮಾಡಿ ಸಾರ್ವಜನಿಕರ ಸೇವೆ ಮಾಡಿ ಜನರ ಬದುಕನ್ನು ಹಸನಾಗಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಹೇಳಿದರು.

ನಗರದ ಭಾರತ ರತ್ನ ಪಂಡಿತ ಭೀಮಸೇನ ಜೋಶಿ ರಂಗ ಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಪ್ರಯುಕ್ತ 2023-24, 2024-25, 2025-26 ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೊತ್ತಮ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹತ್ವದ ಸಾಧನೆ ಮಾಡಿರುವವರನ್ನು ಗೌರವಿಸಿ ಸನ್ಮಾನಿಸುವ ಕ್ಷಣ ಇದಾಗಿದೆ. ವೈಯಕ್ತಿಕ ವಾಗಿ ನನಗೆ ಸಂತೋಷ ತಂದಿದೆ. ನಿಮ್ಮೆಲ್ಲರನ್ನು ನೋಡಿದರೆ ನಮ್ಮಲ್ಲಿ ವಿಸ್ವಾಸ ಇಮ್ಮಡಿಗೊಳ್ಳುತ್ತಿದೆ. ಪಿಯುಸಿ ನಲ್ಲಿ 31 ಸ್ಥಾನದಿಂದ 26ನೇ ಸ್ಥಾನಕ್ಕೆ ಜಿಲ್ಲೆಯ ಫಲಿತಾಂಶ ಮೇಲೆರಿದ್ದು ಸಾಧನೆಯೆ ಎಂದರು.

ನಾನು ಯಾವತ್ತಿಗೂ ಎಲ್ಲ ರಂಗದಲ್ಲೂ ಸಹ ಪ್ರಥಮ ಸ್ಥಾನದಲ್ಲಿಯೇ ಇರಬೇಕು ಎಂಬ ಮನೋಭಾವ ಹೊಂದಿರುವವನು. ನಿಮ್ಮ ಸಾಧನೆಗೆ ನಾನೇಂದು ಸಹಕಾರಿ, ನಿಮ್ಮ ಮೇಲೆ ಸಾಧನೆ ನಿರೀಕ್ಷೆ ಇಟ್ಟಿರುವವನು ನಾನು ಎಂದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ.ಅಸೂಟಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಭರತ್ ಎಸ್ ,ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ ಎಸ್ ನೇಮಗೌಡ ,ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ  ಹಾಜರಿದ್ದರು.

ಗದಗ ಜಿಲ್ಲೆಯಲ್ಲಿ ರಾಜಕೀಯವಾಗಿ ಸಾಮರಸ್ಯ ಹೊಂದಿರುವ ವಾತವರಣವಿದೆ, ಸಾಮಾಜಿಕವಾಗಿ ಶೋಷಣೆ ಪ್ರಕರಣಗಳು ಜಿಲ್ಲೆಯಲ್ಲಿ ತುಂಬಾ ಕಡಿಮೆ ಇವೆ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಸಹಕಾರ ನೀಡುವರು. ಅಧಿಕಾರಿಗಳಿಗೆ ಕಾನೂನು ರೀತಿಯಲ್ಲಿ ಸಾರ್ವಜನಿಕರ ಸೇವೆ ಮಾಡಲು ಸಂಪೂರ್ಣ ಸಹಕಾರ ನೀಡುತ್ತೇವೆ ಪರಿಶ್ರಮ ಪಡದೇ ಸಾಧನೆ ಅಸಾಧ್ಯ ಎಂಬುದನ್ನು ನಾವೆಲ್ಲರು ಅರಿತು ಶ್ರದ್ಧೆಯಿಂದ ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುವ ಅಬ್ಯಾಸ ಮಾಡಿಕೊಳ್ಳೋಣ ಎಂದರು.

ಗದಗ ಜಿಲ್ಲೆಯಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶೇ.98, 99 ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯದಲ್ಲೇ ಉತ್ತಮ ಸ್ಥಾನ ಮಾಡಿದೆ. ಇದೇ ನಿಟ್ಟಿನಲ್ಲಿ ವಿವಿಧ ರಂಗದಲ್ಲಿ ಸಾಧನೆ ನಮ್ಮದಾಗಿಸಿಕೊಳ್ಳೋಣ ಎಂದರು.
ಸಾಧನೆಗೆ ಪ್ರಾಮಾಣಿಕತೆ, ಪರಿಶ್ರಮ, ಶ್ರದ್ಧೆ, ಕಠಿಣ ನಿರ್ಣಯ ಅಗತ್ಯವಿದೆ ಸಂವಿಧಾನದ ಸರಿಯಾದ ಅನುಷ್ಠಾದ ಮೂಲಕ ಗದಗ ಜಿಲ್ಲೆಯನ್ನು ಸರ್ವಶ್ರೇಷ್ಠ ಜಿಲ್ಲೆಯಾಗಿಸೋಣ ಎಂದು ಸಚಿವ ಎಚ್ ಕೆ ಪಾಟೀಲ ಅವರು ಹೇಳಿದರು.

ವಿಧಾನ ಪರಿಷತ್ ಶಾಸಕ ಎಸ್ ವಿ ಸಂಕನೂರ ಮಾತನಾಡಿ, ಯಾವುದೇ ಸರ್ಕಾರ ಜನ ಮೆಚ್ಚುಗೆಗೆ ಪಾತ್ರವಾಗಬೇಕಾದರೇ ಅದು ರಾಜ್ಯ ಸರ್ಕಾರಿ ನೌಕರರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಪ್ರಾಸ್ತಾವಿಕ ಮಾತನಾಡಿ, ಹಳೇ ಬೇರು ಹೊಸ ಚಿಗುರು ಎಂಬ ಪರಿಕಲ್ಪನೆಯಲ್ಲಿ ಇಂದಿನ ಕಾರ್ಯಕ್ರಮ ಆಯೋಜಿಸಿದೆ. 126 ಮಕ್ಕಳು ಶೇ.100 ಅಂಕ ಪಡೆದು ಯಶಸ್ವೀ ಆಗಿದ್ದಾರೆ. ಇಂಗ್ಲೀಷ್, ಗಣಿತ, ವಿಜ್ಞಾನ ವಿಷಯಗಳಲ್ಲಿ ಶೇ.100 ಅಂಕ ಗಳಿಸಿ ಜಿಲ್ಲೆಗೆ ಹೆಮ್ಮೆ ತಂದು ಕೊಟ್ಟಿದ್ದಾರೆ. ಉತ್ತಮ ಅಂಕ ಗಳಿಸುವಲ್ಲಿ ಶಿಕ್ಷಕರ ಪಾತ್ರ ಮರೆಯಲು ಸಾಧ್ಯವಿಲ್ಲ. ಅಬ್ಬಿಗೇರಿ ಅಟಲ್ ಬಿಹಾರಿ ಶಾಲೆ, ಮಲ್ಲ ಸಮುದ್ರ ಶಾಲೆ ಮಕ್ಕಳು ಶೇ.100 ರಷ್ಟು ಮಕ್ಕಳು ಉತ್ತೀರ್ಣ ಹೊಂದುವ ಮೂಲಕ ಸಾಧನೆ ಮೆರೆದಿದ್ದಾರೆ. ಈ ಸಾಧನೆಯಲ್ಲಿ ಪೋಷಕರ ಪರಿಶ್ರಮ ಅಪಾರವಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಾಧನ ಮಾಡಲಾಯಿತು ಹಾಗೂ ಪಿಯುಸಿ ಯಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸನ್ಮಾನಗೊಳಿಸಲಾಯಿತು.