ಗದಗ: ಗದಗ ಗ್ರಾಮೀಣ ಠಾಣೆ ಪೊಲೀಸರು ಅಂತರ್ ಜಿಲ್ಲಾ ಮೋಟಾರ್ ಸೈಕಲ್ ಕಳ್ಳನೊಬ್ಬನನ್ನು ಬಂಧಿಸಿ, 15 ಲಕ್ಷ ರೂಪಾಯಿ ಮೌಲ್ಯದ 13 ಮೋಟಾರ್ ಸೈಕಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ಪ್ರಕರಣದ ವಿವರ:
ದಿನಾಂಕ 29-03-2025 ರಂದು ಮಧ್ಯಾಹ್ನ 2.30 ರಿಂದ ಸಂಜೆ 06.30 ರ ನಡುವೆ, ಗದಗ ಜಿಮ್ಸ್ ವೈದ್ಯಕೀಯ ಕಾಲೇಜಿನ ವಸತಿ ನಿಲಯದ ಮುಂದೆ ನಿಲ್ಲಿಸಿದ್ದ ಎಂಬಿಬಿಎಸ್ ವಿದ್ಯಾರ್ಥಿ ಹರಿಣಾಂಕ ಕೆ. ಅವರ ಕೆ.ಟಿ.ಎಮ್ ಡ್ಯೂಕ್-250 ಮೋಟಾರ್ ಸೈಕಲ್ (KA-04 AN 8571) ಕಳ್ಳತನವಾಗಿತ್ತು. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಿನಾಂಕ 30-03-2025 ರಂದು ಪ್ರಕರಣ ದಾಖಲಿಸಲಾಗಿತ್ತು.
ಜಿಲ್ಲೆಯ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಡಿ.ಎಸ್.ಪಿ ಅವರ ಮಾರ್ಗದರ್ಶನದಲ್ಲಿ ಪಿಐ ಸಿದ್ದರಾಮೇಶ್ವರ ಗಡೇದ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು.
ತಂಡವು 29-03-2025 ರಂದು ಜಿಮ್ಸ್ ವೈದ್ಯಕೀಯ ಕಾಲೇಜಿನ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಸೈಯದಅಲಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿತು. ವಿಚಾರಣೆಯ ವೇಳೆ ಆರೋಪಿ ಬೇರೆ ಬೇರೆ ಜಿಲ್ಲೆಗಳಲ್ಲಿ ಮೋಟಾರ್ ಸೈಕಲ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಂಧಿತನಿಂದ 15 ಲಕ್ಷ ರೂ. ಮೌಲ್ಯದ 13 ಮೋಟಾರ್ ಸೈಕಲ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಜಪ್ತಿಯಾದ ವಾಹನಗಳಲ್ಲಿ ಕೆ.ಟಿ.ಎಮ್, ರಾಯಲ್ ಎನ್‌ಫೀಲ್ಡ್, ಬಜಾಜ್ ಪಲ್ಸರ್, ಬಜಾಜ್ ಆರ್.ಎಕ್ಸ್ 100 ಮತ್ತು ವಿವಿಧ ಕಂಪನಿಗಳ ಸ್ಕೂಟಿ ಮೋಟಾರ್ ಸೈಕಲ್‌ಗಳು ಸೇರಿವೆ.
ಆರೋಪಿ ಸೈಯದಅಲಿ ಕಳೆದ ಎರಡು ವರ್ಷಗಳಲ್ಲಿ ಗದಗ, ಉಡುಪಿ, ಮಂಗಳೂರು, ಬೆಳಗಾವಿ, ಹಾವೇರಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ಕಳ್ಳತನ ಎಸಗಿದ್ದಾನೆ. ಈತನ ಮೇಲೆ ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ ಮತ್ತು ರಾಮನಗರ ಜಿಲ್ಲೆಗಳಲ್ಲಿಯೂ ಬೈಕ್ ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ.
ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.