ಕೊಪ್ಪಳ: ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ನಡೆದಾಗ ಭಕ್ತಾದಿಗಳು ಅರ್ಪಿಸಿದ ಕೋಟ್ಯಂತರ ರೂಪಾಯಿಗಳ ನಡುವೆ ಅಡಗಿದ್ದ ವಿದ್ಯಾರ್ಥಿಗಳಿಬ್ಬರ ಮುಗ್ಧ ಪತ್ರಗಳು ಬೆಳಕಿಗೆ ಬಂದಿವೆ. ಈ ಪತ್ರಗಳು ಅವರ ಭಕ್ತಿ, ನಿಷ್ಕಲ್ಮಶ ಮನಸ್ಸು ಹಾಗೂ ಆಸೆಯ ಅನಾವರಣಗೊಳಿಸಿವೆ.
ಒಬ್ಬ ವಿದ್ಯಾರ್ಥಿಯು ತಾನು ಪರೀಕ್ಷೆಯಲ್ಲಿ ವಿಷಯವಾರು ನಿರೀಕ್ಷಿತ ಅಂಕಗಳನ್ನು ಗಳಿಸಿದರೆ ಸಾಕು ಎಂದು ಬೇಡಿಕೊಂಡಿದ್ದಾಳೆ. “ತಾಯೇ ಹುಲಿಗೆಮ್ಮ, ನನಗೆ ಈ ವಿಷಯದಲ್ಲಿ ಇಷ್ಟು ಅಂಕ ಬರಬೇಕು, ಅದಕ್ಕಿಂತ ಕಡಿಮೆ ಬೇಡ” ಎಂದು ಆಕೆ ಬರೆದ ಪತ್ರವು ಎಲ್ಲರ ಗಮನ ಸೆಳೆದಿದೆ.
ಇನ್ನೋರ್ವ ವಿದ್ಯಾರ್ಥಿನಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕನಸುಗಳನ್ನೇ ತಾಯಿಯ ಮುಂದೆ ತೆರೆದಿಟ್ಟಿದ್ದಾಳೆ. “ನಾನು ಡಿ.ಇಡಿ ಪಾಸಾಗಿ, ಮದುವೆಯಾಗಿ, ನಾನು ಕಲಿತ ಶಾಲೆಯಲ್ಲೇ ಸರಕಾರಿ ಶಿಕ್ಷಕಿಯಾದರೆ, ಎರಡು ತಿಂಗಳ ಸಂಬಳದ ಜೊತೆಗೆ ಎರಡು ಮುದ್ದಾದ ಕುರಿಗಳನ್ನು ನಿನಗೆ ಅರ್ಪಿಸುತ್ತೇನೆ ಅಮ್ಮಾ” ಎಂದು ಆಕೆ ಬರೆದ ಹರಕೆಯ ಪತ್ರವು ಭಕ್ತಿಯ ಪರಾಕಾಷ್ಠೆಯನ್ನು ತೋರಿಸುತ್ತದೆ.
ಈ ಮುಗ್ಧ ಹರಕೆಗಳ ಜೊತೆಗೆ, ಹುಂಡಿಯಲ್ಲಿ ಭಕ್ತರು ಅರ್ಪಿಸಿದ ಬರೋಬ್ಬರಿ 94 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಅಷ್ಟೇ ಅಲ್ಲ, ಅಚ್ಚರಿಯೆಂದರೆ ಇದರಲ್ಲಿ ನೇಪಾಳದ 20 ರೂಪಾಯಿ ಮುಖಬೆಲೆಯ ನೋಟು ಕೂಡ ಪತ್ತೆಯಾಗಿದೆ.
ಭಕ್ತರ ಕಾಣಿಕೆಯಲ್ಲಿ 160 ಗ್ರಾಂ ಕಚ್ಚಾ ಬಂಗಾರ ಹಾಗೂ 10 ಕಿಲೋಗ್ರಾಂ ಕಚ್ಚಾ ಬೆಳ್ಳಿ ಕೂಡ ಸೇರಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಿಂದ ಲಕ್ಷಾಂತರ ಭಕ್ತರನ್ನು ಹೊಂದಿರುವ ಹುಲಿಗೆಮ್ಮ ದೇವಸ್ಥಾನಕ್ಕೆ ಹುಣ್ಣಿಮೆ ಮತ್ತು ಪ್ರತಿ ಮಂಗಳವಾರ, ಶುಕ್ರವಾರಗಳಂದು ಭಕ್ತಸಾಗರವೇ ಹರಿದು ಬರುತ್ತದೆ. ಈ ಬಾರಿ ಹುಂಡಿಯಲ್ಲಿ ಸಿಕ್ಕಿರುವ ಈ ವಿಚಿತ್ರ ಹಾಗೂ ಮುದ್ದಾದ ಹರಕೆ ಪತ್ರಗಳು ಭಕ್ತರ ನಂಬಿಕೆ ಮತ್ತು ಭಕ್ತಿಯನ್ನು ಮತ್ತಷ್ಟು ಅನಾವರಣಗೊಳಿಸಿವೆ.