ಗದಗ: ನಗರದಲ್ಲಿ ಪರಿಶಿಷ್ಟ ಜಾತಿಯ ಕೊರಮ ಜನಾಂಗಕ್ಕೆ ಸೇರಿದ ಅಟೋ ಚಾಲಕರಿಗೆ ಅಟೋ ಸ್ಟ್ಯಾಂಡ್‌ಗಳಲ್ಲಿ ಪಾಳಿ ನೀಡದಿರುವ ಕುರಿತಂತೆ ಕೊರಮ ಜನಾಂಗದ ಆಟೋ ಚಾಲಕರು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ಚರ್ಚೆಗೆ ಕಾರಣವಾಗಿದೆ.

ಗದಗ ಬೆಟಗೇರಿ ಅವಳಿ ನಗರದಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ ಕೊರಮ ಜಾತಿಗೆ ಸೇರಿದ ಸುಮಾರು ಇಪ್ಪತ್ತೈದಕ್ಕೂ ಮಿಕ್ಕಿ ಅಟೋ ಚಾಲಕರಿದ್ದೇವೆ. ಅಟೋದಿಂದ ಬರುವ ಆದಾಯದಿಂದಲೇ ನಮ್ಮ ಕುಟುಂಬದ ಸದಸ್ಯರು ತುತ್ತಿನ ಚೀಲ ತುಂಬುತ್ತದೆ.

ಈ ಮಧ್ಯೆ ಗದಗ ಬೆಟಗೇರಿ ಅವಳಿ ನಗರದಲ್ಲಿನ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಜಿಲ್ಲಾಸ್ಪತ್ರೆಗಳಲ್ಲಿನ ಅಟೋ ರಿಕ್ಷಾ ನಿಲ್ದಾಣಗಳಲ್ಲಿ ನಮ್ಮ ಕೊರಮ ಜಾತಿಗೆ ಸೇರಿದ ಅಟೋ ಚಾಲಕರಿಗೆ ಪಾಳಿ ನೀಡಲು ನಿರಾಕರಿಸುತ್ತಿದ್ದಾರೆ.

ನಾವು ಪರಿಶಿಷ್ಟ ಜಾತಿಯಲ್ಲಿ ಜನ್ಮ ತಳೆದಿರುವದೇ ನಮ್ಮ ಪಾಲಿಗೆ ಮುಳುವಾಗಿದೆ. ಪ್ರತಿದಿನ ನಮಗೆ ಪಾಳಿ ದೊರೆಯದಿದ್ದಲ್ಲಿ ನಮ್ಮ ಕುಟುಂಬದ ಎಲ್ಲ ಸದಸ್ಯರು ಉಪವಾಸ ಬೀಳುವಂತಾಗಿದೆ. ಲಕ್ಷಾಂತರ ರೂಪಾಯಿಗಳ ಸಾಲ ಸೋಲ ಮಾಡಿ ಅಟೋ ಖರೀದಿಸಿದ್ದು, ಅಟೋ ಪಾಳಿ ದೊರೆಯದಿದ್ದಲ್ಲಿ ಸಾಲದ ಕಂತು ಭರಿಸುವದಾದರೂ ಹೇಗೆ ಎಂಬುದು ನಮ್ಮ ಚಿಂತೆಯಾಗಿದೆ.

ಒಂದು ತಿಂಗಳು ಸಾಲದ ಕಂತು ಭರಿಸದಿದ್ದಲ್ಲಿ ಸಾಲ ನೀಡಿದ ಕಂಪನಿ ಅಟೋಗಳನ್ನು ಸೀಜ್ ಮಾಡುತ್ತದೆ. ಆಗ ನಮ್ಮ ಕುಟುಂಬಗಳು ಬೀದಿ ಪಾಲಾಗುತ್ತವೆ.

ಈ ಅಟೋ ನಿಲ್ದಾಣಗಳಲ್ಲಿ ಕೆಲ ಗೂಂಡಾ ವ್ಯಕ್ತಿಗಳು ಮುಂಗೈ ಜೋರಿನಿಂದ ತಮಗೆ ಬೇಕಾದ ಅಟೋಗಳಿಗೆ ಪಾಳಿ ಕೊಡಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿನ ಅಟೋ ಸ್ಟಾಂಡನಲ್ಲಿ ಅಟೋರಿಕ್ಷಾ ನಿಲ್ಲಿಸಿ ಸಾರ್ವಜನಿಕರಿಗೆ ಸೇವೆ ನೀಡಲು ಈ ಗೂಂಡಾಗಳಿಗೆ ಐದು ಸಾವಿರ ರೂಪಾಯಿಗಳನ್ನು ನೀಡುವಂತೆ ಪೀಡಿಸಲಾಗುತ್ತಿದೆ.

ದಯವಿಟ್ಟು ಬಡ ಅಟೋ ಚಾಲಕರ ಮೇಲೆ ಕನಿಕರ ತೋರುವಂತೆ ಈ ಮೂಲಕ ತಮ್ಮನ್ನು ಆಗ್ರಹಿಸುತ್ತೇವೆ ಎಂದು ನೊಂದ ಆಟೋ ಚಾಲಕರು ಎಸ್ಪಿ ಬಿ.ಎಸ್. ನೇಮಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ.