ರಾಮನಗರ: ಕುರ್ಚಿಗಾಗಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಮಧ್ಯೆ ವಾಗ್ವಾದದ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ಚನ್ನಪಟ್ಟಣದ ಬಮೂಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಸರ್ಕಾರದ ನಾಮನಿರ್ದೇಶಿತ ನಿರ್ದೇಶಕ ಎಸ್ ಲಿಂಗೇಶ್ ಕುಮಾರ್ ಹಾಗೂ ಬಮೂಲ್ ನಿರ್ದೇಶಕ ಜಯಮುತ್ತು ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ.
ಕುರ್ಚಿಯಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಜಗಳವಾಗಿದೆ. ಜಗಳಕ್ಕೆ ಬೇರೆ ಯಾವುದೇ ಕಾರಣವಿಲ್ಲ. ಬಮೂಲ್ ಉಪ ವ್ಯವಸ್ಥಾಪಕ ಹೇಮಂತ್ ಕುರ್ಚಿಯಲ್ಲಿ ಕುಳಿತುಕೊಳ್ಳಲು ಮುಂದಾಗಿದ್ದಕ್ಕೆ ಜೆಡಿಎಸ್ ನ ಜಯಮುತ್ತು ಬೆಂಬಲಿಗರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಅಡ್ಡಿಪಡಿಸಿದರು.
ಈ ವೇಳೆಯಲ್ಲಿ ಜೆಡಿಎಸ್ ಕಾರ್ಯಕರ್ತರ ನಡೆಗೆ ಬಿಜೆಪಿಯ ಲಿಂಗೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಜೆಡಿಎಸ್ ಕಾರ್ಯಕರ್ತರು ಅವರ ಮೇಲೆಯೇ ಹರಿಹಾಯ್ದಿದ್ದಾರೆ.
ವಾಗ್ವಾದ ಕೈ-ಕೈ ಮಿಲಾಯಿಸುವ ಹಂತಕ್ಕೆ ತೆರಳಿದಾಗ ಹಲವರು ಮಧ್ಯಪ್ರವೇಶಿಸಿ ಸಮಾಧಾನ ಪಡಿಸಿದರು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.