ಧಾರವಾಡ:  ಇಲ್ಲಿನ ಸರಕಾರಿ ಬಾಲಮಂದಿರದಲ್ಲಿ ಆಶ್ರಯ ಪಡೆದಿದ್ದ ಬಾಲಕಿಯೊಬ್ಬಳು ಬರೋಬ್ಬರಿ ಏಳು ವರ್ಷ ಏಳು ತಿಂಗಳ ನಂತರ ಮತ್ತೆ ಹೆತ್ತವರ ಮಡಿಲು ಸೇರಿದ್ದಾಳೆ.

25-04-2015 ರಂದು ಸರ್ಕಾರಿ ಬಾಲಮಂದಿರ ಬೆಂಗಳೂರಿಂದ ಅನಾಥ ಮಗುವೊಂದು ಹುಬ್ಬಳ್ಳಿ ಉಣಕಲ್ ಪ್ರದೇಶದ ಮನೋವಿಕಲ ಬಾಲಕಿಯರ ಸರಕಾರಿ ಬಾಲಮಂದಿರಕ್ಕೆ ವರ್ಗಾಯಿಸಲಾಗಿತ್ತು.

ಬಾಲಕಿಯ ಆಧಾರ್ ಕಾರ್ಡ್ ಮಾಡಿಸುವಾಗ ಬಾಲಕಿಯ ವಿಳಾಸ ಪತ್ತೆಯಾಗಿದ್ದು, ಆಧಾರ ಕಾರ್ಡನಲ್ಲಿ ತಂದೆ ತಾಯಿಯ ಹೆಸರು ಇರದೇ, ಬಾಲಕಿಯ ಹೆಸರು ಹಾಗೂ ಊರಿನ ಹೆಸರು ನಮೂದಾಗಿತ್ತು. ಹೀಗಾಗಿ ಪಾಲಕರ ಪತ್ತೆ ಹಚ್ಚುವುದೇ ಒಂದು ಸವಾಲಿನ ಕೆಲಸವಾಗಿತ್ತು.

ಆ ಸವಾಲನ್ನು ಸಮರ್ಥವಾಗಿ  ಎದುರಿಸಿದ ಬಾಲಮಂದಿರದ ಅಧೀಕ್ಷಕರಾದ   ಜಾಹೀದಾ ಹುಸೇನಸಾಬ ಕಾಲೇಖಾನ, ಇವರ ಅವಿರತ ಪ್ರಯತ್ನದಿಂದ ಪಾಲಕರನ್ನು ಸಂಪರ್ಕಿಸಿ ಅವರ ಮನ ಒಲಿಸಿ, ಮತ್ತೆ ಮಗುವನ್ನು ಮನೆಗೆ ಕರೆದೊಯ್ಯುವಂತೆ ಮಾಡಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್. ಎಂ. ಕಂಟೆಪ್ಪಗೌಡ್ರ, ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಜಿಲ್ಲಾ ತನಿಖಾ ಸಮಿತಿ ಸದಸ್ಯ ಶಂಕರ ಹಲಗತ್ತಿ,  ಲೀಗಲ್ ಕಂ ಪ್ರೋಬೆಶನ್ ಆಫೀಸರ್ ನೂರಜಾನ್ ಕಿಲ್ಲೆದಾರ  ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಬಾಲಕಿಯನ್ನು ಪಾಲಕರ ವಶಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಮತ್ತು ಮಕ್ಕಳು ಉಪಸ್ಥಿತರಿದ್ದರು.