ಗದಗ: ಕನ್ನಡದ ಕುಲಗುರು, ಭಾವೈಕ್ಯತೆ ಹರಿಕಾರರಾಗಿದ್ದ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ನಾಲ್ಕನೆಯ ಪುಣ್ಯಸ್ಮರಣೆ, ಮರಣವೇ ಮಹಾನವಮಿ ಆಚರಣೆ ಹಾಗೂ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಆಯ್ಕೆಯಾಗಿದ್ದಾರೆ.

ಈ ಕುರಿತು ಗದಗ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಮಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ, ಇದೇ ಅಕ್ಟೋಬರ್ 6ರಂದು ಬೆಳಗ್ಗೆ 10. 30ಕ್ಕೆ ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಶಿವಾನುಭವ ಮಂಟಪದಲ್ಲಿ ಜರುಗಲಿದೆ. ಅದೇ ದಿನ ಡಂಬಳದಲ್ಲಿ ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ ಕಂಚಿನ ಮೂರ್ತಿ ಅನಾವರಣವೂ ಜರುಗಲಿದೆ ಎಂದು ತಿಳಿಸಿದರು.

ಭಾಲ್ಕಿ ಶ್ರೀಗಳು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ತೋರಿದ ಹಾದಿಯಲ್ಲಿ ಸಾಗಿ ಬಂದಿದ್ದು, ಕರ್ನಾಟಕದ ತುತ್ತ ತುದಿಯಲ್ಲಿ ಬಸವಧರ್ಮ ಧ್ವಜವನ್ನು ಎತ್ತಿ ಹಿಡಿಯುವುದರೊಂದಿಗೆ ಅತ್ತ ತೆಲಂಗಾಣ, ಇತ್ತ ಮಹಾರಾಷ್ಟçದಲ್ಲಿ ಬಸವಸಂದೇಶವನ್ನು ಪ್ರಸಾರ ಮಾಡುತ್ತಿರುವುದಲ್ಲದೇ ಮರಾಠಿಯಲ್ಲಿ 200ಕ್ಕೂ ಹೆಚ್ಚು ಮತ್ತು ತೆಲುಗಿನಲ್ಲಿ 30ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿ ಅವುಗಳಲ್ಲಿರುವ ಶರಣ ಸಂದೇಶಗಳನ್ನು ಲಕ್ಷಾಂತರ ಜನರಿಗೆ ತಲುಪಿಸಿದ್ದಾರೆ.

ಬಸವಣ್ಣನವರು ರೂಪಿಸಿದ ಅನುಭವ ಮಂಟಪದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ಸರ್ಕಾರ ಕಳೆದ ವರ್ಷ ರಾಷ್ಟ್ರೀಯ ಬಸವ ಪುರಸ್ಕಾರ ನೀಡಿ ಗೌರವಿಸಿದೆ. ಅಂಥ ಪೂಜ್ಯರಿಗೆ ಡಾ.ತೋಂಟದ ಸಿದ್ಧಲಿಂಗ ಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪ್ರದಾನವನ್ನು ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ ಪ್ರದಾನ ಮಾಡುವರು. ಪ್ರಶಸ್ತಿಯು 5 ಲಕ್ಷ ರೂಪಾಯಿ ಮೊತ್ತ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಿಮಿತ್ಯ ಚಿಂಚಣಿ-ಶಿರೋಳ ಮಠದ ಪೂಜ್ಯ ಅಲ್ಲಮಪ್ರಭು ಮಹಾಸ್ವಾಮಿಗಳನ್ನು ಹಾಗೂ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಬೀದರದ ಬಸವ ಸೇವಾ ಪ್ರತಿಷ್ಠಾನದ ಶರಣೆ ಅಕ್ಕ ಅನ್ನಪೂರ್ಣ ತಾಯಿ ಅವರನ್ನು ಸಂಮಾನಿಸಲಾಗುವುದು ಎಂದು ತಿಳಿಸಿದರು.

ತೋಂಟದ ಸಿದ್ಧರಾಮ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಸಮ್ಮುಖವನ್ನು ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಆಳಂದದ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಸಂಚಾಲಕ ಕೋರಣೇಶ್ವರ ಮಹಾಸ್ವಾಮಿಗಳು, ಸಂಡೂರಿನ ಪ್ರಭು ಮಹಾಸ್ವಾಮಿಗಳು, ಅರಸಿಕೆರೆಯ ಶಾಂತಲಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು, ಬಸವ ಕಲ್ಯಾಣದ ಅನುಭವ ಮಂಟಪದ ಸಂಚಾಲಕರಾದ ಶಿವಾನಂದ ಮಹಾಸ್ವಾಮಿಗಳು ವಹಿಸುವರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಹಕಾರಿ ಸಂಘಗಳ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಡಂಬಳದಲ್ಲಿ ಶ್ರೀಗಳ ಕಂಚಿನ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷರಾದ ಶಿವಕುಮಾರಗೌಡ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎಸ್ ಚಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ, ಲಿಂಗಾಯತ ಪ್ರಗತಿಶೀಲ ಸಂಘದ ದಾನಯ್ಯ ಗಣಾಚಾರಿ, ಬಸವದಳದ ಕಾರ್ಯಾಧ್ಯಕ್ಷರಾದ ಪ್ರಕಾಶ ಅಸುಂಡಿ, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ಸಂಘಟನಾ ಕಾರ್ಯದರ್ಶಿ ಚಂದ್ರು ಚವ್ಹಾಣ, ವೀರೇಶ ಬುಳ್ಳಾ, ಸುರೇಶ ಮರಳಪ್ಪನವರ ಮುಂತಾದವರು ಉಪಸ್ಥಿತರಿದ್ದರು.